ಜಗದಗಲದ ಪ್ರೀತಿ ನಮ್ಮನಗಲುವುದೇಕೆ ಪ್ರಿಯಾ?
ನಮ್ಮನಗಲಿಸುವ ಜನಗಳೇ ಹೆಚ್ಚು ಜಗದಗಲ ಪ್ರಿಯೆ
ಬರುವುದೆಲ್ಲವೂ ಒಮ್ಮಲೆ ಬರುವುದೇಕೆ ಪ್ರಿಯಾ?
ಇರುವುದು ಸಾಸುವೆಯಗಲ ಬರುವುದು ಮಾತ್ರ ಸಾಗರದಷ್ಟು ಪ್ರಿಯೆ
ಗೆಲವು ಸಾಧ್ಯವಿರುವಾಗ ಸೋಲುವುದೇಕೆ ಪ್ರಿಯಾ?
ಊರ ತುಂಬಾ ಚಾಣಕ್ಯರ ಆಧಿಪತ್ಯವೇ ಅಪಾರ ಪ್ರಿಯೆ
ಇಷ್ಟಗಲ ಜಗದಲ್ಲಿ ನಮಗಿಷ್ಟು ತಾವಿಲ್ಲವೇಕೆ ಪ್ರಿಯಾ?
ಇಷ್ಟಗಲ ನಮ್ಮ ಹೃದಯ ಸಾಮ್ರಾಜ್ಯದಲ್ಲಿ ತಾವಿಗ್ಯಾಕೆ ತವಕ ಪ್ರಿಯೆ?
ನಮ್ಮವರೇ ನಮ್ಮನ್ನೇ ಕೊಲ್ಲುವುದೇಕೆ ಪ್ರಿಯಾ?
ಬೇರೆಯವರು ಕೊಂದರೆ ಮೈಲಿಗೆ ಪ್ರಿಯೆ
ನಮ್ಮನ್ನು ಹೊರುವವರು ಸಾಲ್ಕು ಜನವೇಕೆ ಪ್ರಿಯಾ?
ಪಿತ-ಪತಿ-ಸುತ-ಹಿತರಿರುವಾಗ ಇನ್ಯಾರು ಬೇಕು ಪ್ರಿಯೆ?
ಸೃಷ್ಟಿ ಅನಿಶ್ಚಿತ, ಸಾವು ನಿಶ್ಚಿತವೇಕೆ ಪ್ರಿಯಾ?
ಸಾವೇ ಸೃಷ್ಟಿಯ ಮರುಹುಟ್ಟು ಪ್ರಿಯೆ
ಭವಕ್ಕೂ ಭಾವಕ್ಕೂ ದೂರವೇಕೆ ಪ್ರಿಯಾ?
ಭಾವದಲ್ಲಿಯೇ ಭವ ಬಂಧಿಯಾಗಿದೆ ಪ್ರಿಯೆ
ಗೊಂಬೆಗಳ ಬಿಂಬಗಳಿಲ್ಲದೆ ಸೋಲ್ಲಿಲ್ಲದ ಮೌನಕ್ಕೆ
ಮನಸೋತೆಯಾ ಪ್ರಿಯೆ? ಮಾತಾಡು ಪ್ರಿಯೆ ಮೌನವನ್ನರಿಸು
08.02.2008
Advertisements